Wednesday, July 1, 2009

ನನ್ನಮ್ಮ ಗ್ರೇಟ್...


ಅಮ್ಮನ ಬಗ್ಗೆ ಯೋಚಿಸುವಾಗಲೆಲ್ಲಾ ಅವ್ಳು ಬೇರೆಯವರಿಗಿಂತ ಇನ್ನೂ ಡಿಫರೆಂಟ್ ಅಂತ ಯಾವಾಗ್ಲೂ ಅನ್ನಿಸ್ತಿತ್ತು. ಎಲ್ರಿಗೂ ಹೀಗೇ ಅನ್ನಿಸ್ತದೋ ಏನೋ ಗೊತ್ತಿಲ್ಲ. ನನ್ನ ಜೀವನದಲ್ಲಿ ಆಕೆ ಮಾಡಿದ ಎಲ್ಲವೂ ತುಂಬಾ ವಿಶೇಷವಾಗಿ ಕಾಣ್ತಾ ಇದೆ. ಅದೇ ತರಹದ ಅಮ್ಮನಾಗಿ ನಾನು ಇರಬಲ್ಲೆನೇ ಅನ್ನುವ ಪ್ರಶ್ನೆ ನನ್ನನ್ನು ಯಾವಾಗ್ಲೂ ಕಾಡ್ತಾನೇ ಇರುತ್ತದೆ. ನಾನೂ ನನ್ನ ಅಮ್ಮನ ತರಹ ತ್ಯಾಗಿ, ಸಹನಶೀಲೆ, ತಾಳ್ಮೆಯ ಪ್ರತಿರೂಪ ಆಗ್ಬೇಕು ಅಂತ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥ ಆದಾಗ ನಾನು ಯೋಚಿಸಿದ್ದಿದೆ ನನ್ನ ಅಮ್ಮ ತುಂಬಾ ಗ್ರೇಟ್ ಅಂತ.ಅಪ್ಪ ಕುಡಿತದ ಚಟಕ್ಕೆ ಬಿದ್ದು ನಮಗಿದ್ದ ಹೊಟೇಲ್ ನಲ್ಲಿ ರಾತ್ರಿ ಗೊಡವೆ ಇಲ್ಲದೆ ಬಿದ್ದಿರುತ್ತಿದ್ದಾಗ ತೋಟ, ಗುಡ್ಡ, ಕಾಡಿನ ಮಧ್ಯೆ ಇದ್ದ ಮುಳಿಹುಲ್ಲಿನ ಒಂಟಿ ಮನೆಯಲ್ಲಿ ಅಮ್ಮ 3 ತಿಂಗಳ ನನ್ನ ತಮ್ಮನ ಜೊತೆ ರಾತ್ರಿ ಕಳೆಯುತ್ತಿದ್ದದ್ದನ್ನು, ತೋಟದಲ್ಲಿ ಸದ್ದಾದಾಗ ತೊಟ್ಟಿಲ ಮಗುವನ್ನು ಎತ್ತಿಕೊಂಡು ಅಡಿಕೆ ಗೋಣಿಗಳೆಡೆಯಲ್ಲಿ ಅಡಗಿ, ಹೊತ್ತು ಕಳೆಯುತ್ತಿದ್ದ ನನ್ನಮ್ಮನ ಬಗ್ಗೆ ನೆನೆಯುವಾಗ ಯಾವಾಗ್ಲೂ ಕಣ್ಣಲ್ಲಿ ನೀರಿಣುಕುತ್ತದೆ.ಆ ವಾತಾವರಣದಲ್ಲಿ ನಾನು ಬೆಳೆಯಬಾರದು ಅಂತ ನನ್ನನ್ನು ಪೇಟೆಯಲ್ಲಿರುವ ದೊಡ್ಡಮ್ಮನ ಮನೆಯಲ್ಲಿಟ್ಟು ಓದಿಸಿ, ತಿಂಗಳಿಗೊಮ್ಮೆ ಬರುವಾಗ ತನ್ನೆಲ್ಲಾ ಕಷ್ಟಗಳನ್ನು ಮುಚ್ಚಿಟ್ಟು ನನಗೆ ಬೇಕಾದದ್ದನ್ನೆಲ್ಲಾ ತೆಗೆಸಿಕೊಟ್ಟು ಹೋಗುತ್ತಿದ್ದಳು. ಆದ್ರೂ ದೊಡ್ಡಮ್ಮನ ಜೊತೆ ಅಪ್ಪ ಕೊಡ್ತಿದ್ದ ಹಿಂಸೆಯನ್ನೆಲ್ಲಾ ಹೇಳಿಕೊಂಡು ಅವಳು ಅಳುವಾಗ ಕದ್ದು ಬಾಗಿಲ ಬಳಿ ಆಲಿಸುತ್ತಿದ್ದ ನನ್ನ ಪುಟ್ಟ ಕಂಗಳು ತುಂಬಿ ಹೋಗುತ್ತಿತ್ತು.ದೊಡ್ಡವಳಾದಂತೆ ನನಗೆ ಸ್ನೇಹಿತೆ ಅವಳೆ ಆದ್ಳು. ಒಂದು ದಿನ ಅಪ್ಪ ಎಳೆದು ಬಿಸಾಡಿದ ತುಂಡು ಬೀಡಿಯನ್ನು ಆಗ ಒಂದನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನ ತಮ್ಮನಿಗೆ ಎಳೆಸಿದ್ದೆ. ಅದು ಗೊತ್ತಾಗಿ ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದು ಹೊಡೆದಿದ್ದಳು. ಅದೇ ಮೊದಲು, ಅದೇ ಕೊನೆ. ಅಮ್ಮ ನನಗೆ ಹೊಡೆದ ನೆನಪೇ ಇಲ್ಲ. ನಾನೇನೇ ತಪ್ಪು ಮಾಡಿದ್ರೂ ಅವಳ ಅಳುವೇ ಬೈಗುಳವಾಗುತ್ತಿತ್ತು. ಅದೊಂದೇ ಸಾಕಿತ್ತು ನನ್ನನ್ನು ತಿದ್ದಲು.ನಮ್ಮದು ಪ್ರೇಮ ವಿವಾಹ. ಕೆಲವು ಕಾರಣಗಳಿಗೋಸ್ಕರ ಈ ಮದುವೆಗೆ ಯಾರ ಒಪ್ಪಿಗೆಯೂ ಇರಲಿಲ್ಲ. ನನ್ನ ಮನೆಯವರಿಲ್ಲದೆ ನಾನು ಮದುವೆ ಮಾಡ್ಕೊಂಡೆ. ಆಮೇಲೆ ಕಾಡಿದ್ದೆಲ್ಲಾ ಅಮ್ಮನ ನೆನಪು ಮಾತ್ರ. ಜೊತೆಗೆ ನನಗಾಗಿ ಕುಡಿತ ಬಿಟ್ಟ ಅಪ್ಪನ ನೆನಪೂ.. ಒಂದು ವರ್ಷದ ನಂತರ ನಾನು ಅಮ್ಮನಾದಾಗ ಅನ್ನಿಸಿತು ನಮ್ಮನ್ನು ಹಡೆಯುದಕ್ಕೆ, ಸಾಕುದಕ್ಕೆ ಆಕೆ ಅದೆಷ್ಟು ಕಷ್ಟ ಪಟ್ಟಿದ್ಳು ಅಮ್ಮ. ನಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾಕೆ ಆಕೆ ಮುಖ್ಯ ಅಂತ ಅನ್ನಿಸ್ಲಿಲ್ಲ. ಮನೆಯಿಂದ ಹೊರಹೋದ ಮಕ್ಕಳನ್ನು ವಾಪಸ್ ಕರೆದುಕೊಳ್ಳುವುದು ತುಂಬಾ ಅಪರೂಪ. ಆದ್ರೆ ನನ್ನಮ್ಮ ಮತ್ತೆ ನನ್ನನ್ನು ಕರೆದ್ಳು. ಮತ್ತೆ ನನ್ನನ್ನು ಪ್ರೀತಿಯಿಂದ ತಲೆ ನೇವರಿಸಿದ್ಳು. ಎಲ್ಲಾ ಮರೆತು ನೀನು ಚೆನ್ನಾಗಿದ್ರೆ ಅಷ್ಟೇ ಸಾಕು ಅಂತ ಹೇಳಿದ್ಳು. ಆ ಮಾತೊಂದೇ ಸಾಕು ನನಗೆ, ನನ್ನಮ್ಮ ಗ್ರೇಟ್ ಅಂತ ಸಾರಿ ಸಾರಿ ಹೇಳುದಕ್ಕೆ...

Saturday, April 4, 2009

ಬೇಡವೆಂದರೂ ಕಾಡುವ ನೆನಪು


ಕಾಲ, ಸಮಯಗಳೆಂಬುದು ನಮ್ಮ ಊಹೆ, ಕಲ್ಪನೆ, ನಿರೀಕ್ಷೆಗಳಿಗೆ ಮೀರಿದ್ದು ಎನ್ನುವ ಸತ್ಯ ಇತ್ತೀಚೆಗೆ ಯಾಕೋ ಬಹಳವಾಗಿ ಕಾಡುತ್ತಿದೆ. ಆ ಸತ್ಯವನ್ನು ಒಪ್ಪಿಕೊಳ್ಳಲೂ ಮನಸ್ಸು ಹಿಂಜರಿಯುತ್ತಿದೆ. ಕಳೆದು ಹೋದ ಸಮಯಗಳು ಮತ್ತೆ ಸಿಗುವಂತಾದರೆ!! ಕಾಲ ಹರಿವ ನೀರಿನಂತಿರದೆ ಬೇಕಾದಾಗ ಪಡೆಯುವ ಟ್ಯಾಪಿನ ನೀರಿನಂತಿದ್ದಿದ್ದರೆ...ಇರಬೇಕಿತ್ತೇನೋ ಅನ್ನುವ ಅನುಭೂತಿಯ ಜೊತೆಗೆ ಅದರ ಅಪಾಯಗಳ ಪರಿಮಿತಿ ಹೆಚ್ಚು ಅನ್ನುವ ಇನ್ನೊಂದು ಸತ್ಯ ನಮಗೆ ಗೋಚರಿಸಿ ಬಿಡುತ್ತದೆ.
ಇತ್ತೀಚೆಗೆ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಿಯಾಗಿ ಹಾಲಿನಲ್ಲಿ ಸುತ್ತಾಡುತ್ತಿದ್ದಾಗ ನಾನು ಪರೀಕ್ಷೆ ಬರೆಯುತ್ತಿದ್ದುದು, ಆ ದಿನಗಳ ತಯಾರಿ, ಭಯ, ಪೇಜು ತುಂಬಿಸುವ ಅವಸರ, ಎಲ್ಲರಿಗಿಂತ ಹೆಚ್ಚು ಅಡಿಶನಲ್ ಶೀಟ್ ತೆಗೆದುಕೊಳ್ಳಬೇಕೆಂಬ ಮುಗ್ಧ ಸ್ಪರ್ಧೆ...ಹೀಗೆ ನೆನಪುಗಳ ಸುರುಳಿ ಬಿಚ್ಚುತ್ತಾ ಹೋದಾಗ ನಾನು ಮತ್ತೆ ಆ ಬಾಲ್ಯ, ಹೈಸ್ಕೂಲು, ಕಾಲೇಜು ಜೀವನಕ್ಕೆ ತೆರಳಬೇಕೆನ್ನಿಸಿತ್ತು. ಅಸಾಧ್ಯದ ಸಾಧ್ಯತೆಗಳೇ ಹೆಚ್ಚಿರುವ ಹುಚ್ಚು ಕಲ್ಪನೆ ಎಂದೆನ್ನಿಸಿ ಒಂದು ಕ್ಷಣ ಯೋಚನೆಗಳಿಗೆ ಬ್ರೇಕ್ ಹಾಕಿದರೂ ಮತ್ತೆ ಮತ್ತೆ ಅದೇ ನೆನಪುಗಳು ಆಪ್ತವಾಗುತ್ತವೆ.
ಅಮ್ಮ ಅಪ್ಪನಿಂದ ದೂರ ಇದ್ದು ಶಾಲೆಗೆ ಹೋಗುತ್ತಿದ್ದ ನಮ್ಮಂತವರ ಬಾಲ್ಯದ ದಿನಗಳು ಇನ್ನೂ ಬೇರೆ. ಬೇರೆ ಮಕ್ಕಳ ಅಮ್ಮಂದಿರು ಶಾಲೆಗೆ ಬುತ್ತಿ ಹಿಡಿದುಕೊಂಡು ಬಂದು ಅವರ ಮಕ್ಕಳಿಗೆ ತಿನ್ನಿಸುತ್ತಿದ್ದಾಗಲಂತೂ ಒಂಟಿತನದ ನೋವು ಬಹಳ ಕಾಡುತ್ತಿತ್ತು. ಆದರೆ ನಮ್ಮ ಮೇಲೆ ಟೀಚರ್ಳಿಗೆ ಇದ್ದ ವಿಶೇಷ ಕಾಳಜಿಗಳು ಎಲ್ಲ ನೋವುಗಳನ್ನು ಮೀರಿದ ಖುಷಿ ಕೊಡುತ್ತಿತ್ತು. ಯಾರಾದರೂ ಬೀಳಿಸಿದರೆ ಅವರ ಮೇಲೆ ಮುನಿಸಿಕೊಂಡು ಟೀಚರ್ ಬಳಿ ದೂರು ಹೇಳುತ್ತಿದ್ದ, ಬಟ್ಟೆಯಲ್ಲಿ ಕೊಳೆಯಾದರೆ ಮನೆಯಲ್ಲಿ ಬೈಗುಳ ಸಿಗುತ್ತದೆ ಎಂಬ ಭಯಕ್ಕೆ ಶಾಲೆಯಲ್ಲಿ ಬಟ್ಟೆ ತೊಳೆದುಕೊಂಡು ಹೋಗುತ್ತಿದ್ದ, ಕಡಿಮೆ ಅಂಕ ತೆಗೆದು ಯಾರಿಗೂ ಹೆಚ್ಚು ಅಂಕ ಸಿಕ್ಕಿಲ್ಲ ಎಂದು ನಮ್ಮನ್ನು ನಾವು ಸಮಥಿಸಿಕೊಳ್ಳುತ್ತಿದ್ದ, ಅಮ್ಮ ನೋಡಲು ಬಂದಾಗಲೆಲ್ಲ ಕೊಡುತ್ತಿದ್ದ 2 ರೂಪಾಯಿಯನ್ನು ನೂರರ ನೋಟಿನಂತೆ ಜೋಪಾನವಾಗಿಟ್ಟು ಅಮ್ಮ ಇನ್ನೊಮ್ಮೆ ಬರುವಾಗ ಕೊಡುವ ಎರಡು ರೂಪಾಯಿ ಸಿಕ್ಕಿದ ಮೇಲೆ 8 ದಿನ ಭರ್ಜರಿ ಐಸ್ಕ್ಯಾಂಡಿ ತಿನ್ನುತ್ತಿದ್ದ ಆ ದಿನಗಳು ಮತ್ತೆ ಬರಬೇಕೆಂದು ಯಾರು ತಾನೇ ಬಯಸುದಿಲ್ಲ.
ಅದೆಲ್ಲಕ್ಕಿಂತ ಹೆಚ್ಚಾಗಿ ನಮ್ಮೊಂದಿಗಿದ್ದ ಮುಗ್ಧತೆ, ಭಯ, ಅಂಜಿಕೆ ಈಗಿನ ಮಕ್ಕಳಲ್ಲಿ ಸಿಗುವುದು ತೀರಾ ವಿರಳ. ಸ್ಟ್ರಿಕ್ಟಾಗಿದ್ದ ದೊಡ್ಡಪ್ಪ ಮನೆಗೆ ಬಂದಾಗ ಟಿ.ವಿ ಎದುರುಗಡೆ ಕೂತಿದ್ದವರು ದಡಬಡ ಓಡಿ ಮೂಲೆಸೇರಿ ಅದೆಷ್ಟೋ ಹೊತ್ತಿನಿಂದ ಓದುತ್ತಿದ್ದೆವು ಅನ್ನುವಂತೆ ಪುಸ್ತಕ ಹಿಡಿದು ಕೊಡುತ್ತಿದ್ದ ಫೋಸು, ಮಂಗಳವಾರ ಪಿಕ್ಚರ್ ಬರುತ್ತದೆ ಎನ್ನುವ ಕಾರಣಕ್ಕೆ 8.30 ಗಂಟೆ ತನಕ ಟಿ.ವಿ.ಹಾಕದೆ, ಸಮಯ ಇನ್ನೇನು ಹತ್ತಿರ ಬಂತು ಅನ್ನುವಷ್ಟರಲ್ಲಿ ಇಲ್ಲದ ಪಾಠದ ಡೌಟ್ ಗಳನ್ನು ಕೇಳಿ ಅಲ್ಲೇ ಪಿಕ್ಚರ್ ನೋಡ್ಬೇಕಾ? ಒಳ್ಳೆ ಪಿಕ್ಚರ್ ಅಂತೆ ಎಂದು ಮುನ್ನುಡಿ ಹಾಕುತ್ತಿದ್ದಾಗ ಅವರ ಮಕ್ಕಳೆಲ್ಲಾ ರೂಮಿನ ಬಾಗಿಲ ಸಂದಿನಲ್ಲಿ ಉತ್ತರಕ್ಕೋಸ್ಕರ ನಿರೀಕ್ಷಿಸುತ್ತಿದ್ದ ದೃಶ್ಯಗಳೆಲ್ಲಾ ಫಿಲ್ಮ್ ರೀಲಿನಂತೆ ಸುತ್ತುತ್ತದೆ.
ಶಾಲಾ ದಿನಗಳಲ್ಲಿ ಮಾಡುತ್ತಿದ್ದ ಡ್ಯಾನ್ಸ್, ಹಾಡುತ್ತಿದ್ದ ಹಾಡು, ಹೇಳುತ್ತಿದ್ದ ಭಾಷಣ...ಹೀಗೆ ಆಸಕ್ತಿ ಇಲ್ಲದ ವಿಷಯಗಳೇ ಇರಲಿಲ್ಲ. ಆಗ ಅತೀ ಚಿಕ್ಕ ಸ್ಪರ್ಧಿಯಾಗಿ(ವಯಸ್ಸಿನಲ್ಲೂ, ದೇಹದಲ್ಲೂ) ವೇದಿಕೆ ಹತ್ತಿದಾಗ ಬಂದಿದ್ದ ಅತಿಥಿಗಳು ಹತ್ತಿರ ಕರೆದು ಬೆನ್ನು ತಟ್ಟಿ ಕೊಟ್ಟ ಚಾಕಲೇಟುಗಳೇ ಇವತ್ತಿಗೂ ಇರುವ ಆತ್ಮವಿಶ್ವಾಸಕ್ಕೆ ಕಾರಣ ಆಯಿತು ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಕಾಲೇಜಿನಲ್ಲೂ, ಸಾಂಸ್ಕೃತಿಕ ಚಟುವಟಿಕೆಗಳೇ ಹೆಚ್ಚಾಗಿದ್ದದ್ದರಿಂದ ಪರೀಕ್ಷೆಯ ಸಮಯ ಬಂದಾಗ ಹಾಸ್ಟೆಲ್ ನಲ್ಲಿ ಬೆಳಗಿನವರೆಗೂ ಕೂತು ಪರೀಕ್ಷೆ ಬರೆದು ಬರುತ್ತಿದ್ದ ನೆನೆಪುಗಳು ಈಗ ಒಂದು ತೆರನಾದ ಖುಷಿ ಕೊಡುತ್ತಿದೆ ಜೊತೆಗೆ ನನ್ನ ಬಗ್ಗೆ ನನಗೇ ಸಣ್ಣದಾದ ಅಭಿಮಾನ ಬಂದುಬಿಡುತ್ತದೆ.
ದ್ವೇಷ, ಅಸೂಯೆ ಗೊತ್ತಿರದ ನಮ್ಮನ್ನೂ, ಜಾತಿ, ರಾಜಕೀಯ, ಗುಂಪುಗಾರಿಕೆಗಳ ಜೊತೆ ಬದುಕುವ ಈಗಿನ ವಿದ್ಯಾರ್ಥಿಗಳನ್ನೂ...ಸುಂದರ ಕಲ್ಪನೆಗಳು, ಮುಗ್ಧತನಗಳೊಂದಿಗೆ ಆಟವಾಡುತ್ತಾ, ಅಜ್ಜಿ ಕಥೆ ಕೇಳುತ್ತಾ ಬೆಳೆದ ನಮ್ಮ ಬಾಲ್ಯವನ್ನೂ...ರಿಯಾಲಿಟಿ ಶೋಗಳ ನಡುವೆ ಬಾಲ್ಯದ ಸೂಕ್ಷ್ಮ ಅನುಭವ, ಅನುಭಾವಗಳನ್ನು ಕಳೆದು ಕೊಳ್ಳುತ್ತಿರುವ ಈಗಿನ ಮಕ್ಕಳನ್ನೂ ನೊಡಿದರೆ ಅವರ ಬಗ್ಗೆ ಮರುಕವೆನ್ನಿಸುತ್ತದೆ. ಅವರ ಸ್ಪರ್ಧೆ ಮನೋಭಾವ, ಸಮಾಜವನ್ನು ಅದೇ ಧೈರ್ಯ, ಆತ್ಮವಿಶ್ವಾಸದಿಂದ ಎದುರಿಸಬೇಕಾದ ಎಲ್ಲಾ ಅನಿವಾರ್ಯತೆಗಳಿದ್ದರೂ ಬಾಲ್ಯ ಅದರಂತೆಯೇ ಇದ್ದರೆ ಚೆನ್ನ ಮತ್ತು ಆ ಬಾಲ್ಯದ ನೆನಪುಗಳು ಇನ್ನೂ ಚೆಂದ.

ಮಾಯವಾಗುತ್ತಿರುವ ಜನಪದ ಸಾಹಿತ್ಯ ಪ್ರೀತಿ...


ಜನಪದ ಸಾಹಿತ್ಯ ಅದು ಜನರ ಪದ.ಜನರ ಬಾಯಿಯಿಂದ ಬಾಯಿಗೆ, ಸಂದರ್ಭ ಸನ್ನಿವೇಶಗಳಿಗಾನುಸಾರವಾಗಿ, ಪರಿಸ್ಥಿತಿ,ನಂಬಿಕೆ ನಡುವಳಿಕೆಗಳಿಗೆ ಅನುಗುಣವಾಗಿ ಹುಟ್ಟಿಕೊಂಡಂತಹ ಗೀತೆಗಳು, ನೃತ್ಯಗಳು ಪದಗಳು ಎಲ್ಲವೂ ಸಹ ನಮ್ಮ ಹಿರಿಯ ತಲೆಮಾರಿನವರ ಆಚಾರ-ವಿಚಾರಗಳಿಗೆ ಪ್ರತ್ಯಕ್ಷ ಸಾಕ್ಷಿಗಳಿದ್ದಂತೆ ಜನಪದ ಸಾಹಿತ್ಯ ಮತ್ತು ಮಹಿಳೆಯರ ನಡುವೆ ಅದೊಂದು ರೀತಿಯಲ್ಲಿ ಅವಿನಾಭಾವ ಸಂಬಂಧವಿದ್ದಂತೆ ಇದೆ.ಹಿಂದಿನ ದಿನಗಳಲ್ಲಿ ಮಹಿಳೆಯಿದ್ದ ಸಾಮಾಜಿಕ ಕೌಟುಂಬಿಕ ಪರಿಸರಗಳು ಎಲ್ಲವನ್ನೂ ಸಹ ಜನಪದ ಸಾಹಿತ್ಯದಡಿ ಬರುವಂತಹ ಪದಗಳು,ಒಗಟುಗಳು,ಗಾದೆಗಳೆಲ್ಲವೂ ಒಳಗೊಂಡಿದೆ ಅನ್ನುವಂತಹದ್ದನ್ನು ನಾವು ಗಮನಿಸಬಹುದು.ಬಹುಶಃ ಆಕೆಗೆ ದುಃಖ-ಡುಗುಡಗಳಿಲ್ಲದಿರುತ್ತಿದ್ದರೆ,ಹೆಣ್ಣಿಗೊಂದು ಸಾಮಾಜಿಕ ಅಸ್ತಿತ್ವ ಇಲ್ಲದೇ ಹೋಗಿದ್ದಿದ್ದರೆ ಜನಪದ ಸಾಹಿತ್ಯದ ಹುಟ್ಟು ಮತ್ತು ಬೆಳವಣಿಗೆಗೆ ಸ್ವಲ್ಪ ಮಟ್ಟಿನ ತೊಡಕಾಗಿರಬಹುದೇನೋ.ಅಷ್ಟರಮಟ್ಟಿಗೆ ಜನಪದ ಸಾಹಿತ್ಯ ಮಹಿಳೆಯರ ನೋವು-ನಲಿವು-ಭಾವನೆ-ನಂಬಿಕೆಗಳಿಗೆ ಸಾಕ್ಷಿಯಾಗಿದೆ. ಈಗ ಜನಪದ ಸಾಹಿತ್ಯದ ಬಗ್ಗೆ ಸ್ವಲ್ಪ ಮಟ್ಟಿಗೆ ಹೇಳುವುದಾದರೆ ಪ್ರತಿಯೊಂದು ನಾಡಿನ ಜನತೆಯೂ ತನ್ನ ಆಚಾರ ವಿಚಾರಗಳ ಮೂಲಕ ಪರಂಪರೆಯಿಂದ ಅನೇಕ ಸಂಗತಿಗಳನ್ನು ಹೊತ್ತು ತರುತ್ತಿರುತ್ತದೆ.ಪದ್ದತಿ,ಸಾಹಿತ್ಯದ ಬಗೆ,ಮದ್ದು ಕ್ರೀಡೆ,ಕಲೆ,ನೃತ್ಯ ನಾಟಕ,ಅಡುಗೆ,ಉಡುಗೆ-ತೊಡುಗೆ,ಧಾರ್ಮಿಕ ಕ್ರಿಯೆ,ಜೀವನ ವಿಧಾನ ಇವುಗಳೆಲ್ಲವೂ ಅದರೊಂದಿಗೆ ಸೇರಿರುತ್ತವೆ.ಇವೆಲ್ಲವನ್ನೂ ಒಟ್ಟಾಗಿ ಜಾನಪದ ಎನ್ನುವ ವಿಶಾಲ ಅರ್ಥದಡಿ ನಾವು ತಂದ್ದಿದ್ದೇವೆ.ಜಾನಪದ ಸಾಹಿತ್ಯವೆಂದರೆ ಗೀತೆ,ಲಾವಣಿ,ಕಥೆ,ಗಾದೆ,ಒಗಟು ಹೀಗೆ ಇಂತಹಾ ನಾನಾ ಪ್ರಕಾರಗಳನ್ನು ಒಳಗೊಂಡಿರುವಂತಹವುಗಳು. ನಾಡಿನ ಸಾಂಸ್ಕೃತಿಕ ಚರಿತ್ರೆಯ ಹೊಸ ನಿರ್ಮಾಣಕ್ಕೆ ಅಗತ್ಯವಾಗಿರುವ ಅದೆಷ್ಟೋ ಅಂಶಗಳು ನಮಗೆ ಜನಪದ ಸಾಹಿತ್ಯದಲ್ಲಿ ದೊರೆಯುತ್ತವೆ.ಬೇರೆ-ಬೇರೆ ಆಡಿವಾಸಿಗಳ ಗುಂಪುಗಳು,ಗಿರಿಜನರು,ಹಳ್ಳಿಗರು,ಹೆಂಗಸರು ಇವರೆಲ್ಲರೂ ತಮ್ಮ ಬದುಕನ್ನು ಕಡೆಗಣಿಸುವುದರಲ್ಲಿ ಅಪಾಯವಿದೆ ಅನ್ನುವುದು ವಾಸ್ತವ ಸಂಗತಿ.ಆದರೆ ಇಂತಹ ಜನರೇ ಶೇ. 80ರಷ್ಟು ಭಾಗ ಇದ್ದಾರೆ ಎಂಬುವುದೂ ಅಷ್ಟೇ ಸತ್ಯ.ಬಹುಷಃ ಅಕ್ಷರ ಕಲಿಕೆಯಲ್ಲಿ ಆಸಕ್ತಿ ತೋರದೇ ಇದ್ದಂತಹ ಈ ಜನರು ತಮ್ಮದೇ ಪ್ರತ್ಯೇಕ ಸಂಸ್ಕೃತಿಯ ಜೊತೆ ಬೆಳೆದು ಬಂದವರು ಮತ್ತು ಸಾಹಿತ್ಯ-ಸಂಸ್ಕೃತಿ ದಬ್ಬಾಳಿಕೆಗೆ ಒಳಗಾದವರು ಎನ್ನುವಲ್ಲಿ ಎರಡು ಮಾತಿಲ್ಲ. ಜನಪದ ಅಧ್ಯಯನದಿಂದ ನಮ್ಮ ಸಾಂಸ್ಕೃತಿಕ ಚರಿತ್ರೆಯ ಪುನರ್ ನಿರ್ಮಾಣಕ್ಕೆ ಹೊಸ ವಸ್ತು ಸಿಗುತ್ತದೆ ಎಂದಾಕ್ಷಣ ಅವೆಲ್ಲವನ್ನೂ ಕಣ್ಣು ಮುಚ್ಚೀ ಒಪ್ಪಿಕೊಳ್ಳಬೇಕೆಂದಲ್ಲ.ಅದು ಅಪ್ಪಟ ಚಿನ್ನವೆಂದಲ್ಲ.ಏಕಂದರೆ ಜಾನಪದ ಸಾಹಿತ್ಯ-ಸಂಸ್ಕೃತಿಯ ಹೆಸರಿನಲ್ಲಿ ಹಲವಾರು ಮೂಡನಂಬಿಕೆಗಳು ಜನರನ್ನು ಸುಲಿಗೆ ಮಾಡಿದ್ದನ್ನೂ ನಾವಿಲ್ಲಿ ಗಮನಿಸಬಹುದು.ಹೆಚ್ಚಿನ ಸಾಮಾಜಿಕ ಪದ್ದತಿಗಳನ್ನು ಅವುಗಳು ಸೃಷ್ಟಿಯ ಆದಿಯಿಂದಲೂ ಇದ್ದಂತಹವುಗಳು ಅಥವಾ ದೇವರು ಸೃಷ್ಟಿಸಿದವುಗಳು ಎಂಬುವುದನ್ನೇ ಜನರು ನಂಬಿಕೊಂಡು ಬಂದವರು.ಒಡೆಯನಿಗೆ ಬಲಿಯಾದ ಕೆಳವರ್ಗದ ಬಂಟರಿಗೆ ಇಲ್ಲಿ ಲೆಕ್ಕವಿಲ್ಲ.ಕೆರೆಗೆ, ಪ್ರವಾಹಕ್ಕೆ, ‘ನಿಧಿ’ಗೆ ಬಲಿಯಾದ ಗರತಿಯರು,ಗರ್ಭಿಣಿಯರು ಮತ್ತು ಸತ್ತ ಗಂಡನ ತಲೆಯನ್ನು ಮಡಿಲಲ್ಲಿ ಕಟ್ಟಿಕೊಂಡು ಅಗ್ನಿಗೆ ಆಹುತಿಯಾದ ಹೆಣ್ಣು ಮಕ್ಕಳನ್ನು ನಾವು ಈ ನಿಟ್ಟಿನಲ್ಲಿ ಮರೆಯುವಂತಿಲ್ಲ. ಜಾನಪದದ ಅನೇಕ ಪದರುಗಳು ಅತ್ಯಂತ ನೂತನ ಸಂಗತಿಗಳನ್ನು ಹೊರಗೆ ಹಾಕುತ್ತವೆ.ಫಲ ಸಮೃದ್ಧಿ ದೇವತೆಯ ಆರಾಧಾನೆ,ಬೆತ್ತಲೆ ಹೆಣ್ಣು ಪೂಜಿಸುವುದಕ್ಕೆ ಮೊದಲಾದ ಪದ್ದತಿಗಳು ಇಂದಿಗೂ ಇವೆ. ಶಿಷ್ಟ ಸಾಹಿತಯ್ದಲ್ಲಿ ನೋಡಿದಾಗ ಅನೇಕ ‘ಶಿಷ್ಟರು’ ಎಂದು ಅನ್ನಿಸಿಕೊಂಡವರು ಹೆಣ್ಣನ್ನು ಅತ್ಯಂತ ಹೀನಾಯವಾಗಿ ಚಿತ್ರಿಸಿರುವುದನ್ನೂ ಸಹ ನಾವು ಕಾಣುತ್ತಿದ್ದೇವೆ.ಆದರೆ ಜನಪದ ಸಾಹಿತ್ಯದಲ್ಲಿ, ಜನಪದ ಆವರಣದಲ್ಲಿ,ಬೆವರು ಹರಿಸಿ ದುಡಿಯುವ ಹೆಣ್ಣು ಕೂಡ ಅನೇಕ ವಿಚಾರಗಳಲ್ಲಿ ಮಾನ್ಯಳಾದವಳು.ಜನಪದ ಸಾಹಿತ್ಯ ರಚನೆಯ ಬಹುಪಾಲು ಕೀರ್ತಿ ಈಕೆಯದು ಎಂದರೆ ತಪ್ಪಾಗಲಾರದು. ಮಕ್ಕಳನ್ನು ಹೊತ್ತು,ಹೆತ್ತು,ಸಾಕಿ,ಮುದ್ದಾಡಿದ ಆಕೆ ತನ್ನ ಅನುಭವವನ್ನು ಸುಂದರವಾಗಿ ಅನೇಕ ತ್ರಿಪದಿಗಳಲ್ಲಿ ಹಾಡಿದ್ದಾಳೆ. ಈ ಪದಗಳನ್ನು ‘ಲಾಲಿ’,’ಜೋಗುಳ’, ‘ನಿದ್ದೆಪದ’, ‘ತೊಟ್ಟಿಲಿನ ಪದ’ ಮುಂತಾದ ಹೆಸರುಗಳಲ್ಲಿ ಕರೆಯುತ್ತಾರೆ.ಮಕ್ಕಳನ್ನು ನೋಡಿ,ಆಡಿಸಿ,ಅವುಗಳ ಆಟಪಾಟಗಳಿಂದ ಅಣಂದ್ಗೊಂಡ ತಾಯಿ ತೊಟ್ಟಿಲು ತೂಗುತ್ತ ರಾಗವಾಗಿ ತನ್ನ ಕಂದನ ಗುಣಗಾನ ಮಾಡುತ್ತಾಳೆ. ಆಡಿ ಬಾ ಎನಕಂದ ಅಂಗಾಲ ತೊಳೆದೇನಾ ತೆಂಗೀನ ಕಾಯಿ ತಿಳಿನೀರತೆಕ್ಕೊಂಡು ಬಂಗಾರ ಪಾದ ತೊಳೆದೇನು. ದಿನನಿತ್ಯದ ಚಟುವಟಿಕೆಗಳನ್ನು ಕಾವ್ಯದ ಮೂಲಕ ಇಲ್ಲಿ ಎಷ್ಟು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಎಂಬುವುದನ್ನು ನೋಡಬಹುದು.ಆ ರೂಪಕಗಳ ಬಳಕೆಗಳಿಂದ ಎಷ್ಟು ಚೆನ್ನಾಗಿ ಒಂದು ಸನ್ನಿವೇಶ ಚಿತ್ರಿತಗೊಂಡಿದೆ ಎಂಬುವುದನ್ನು ನಾವಿಲ್ಲಿ ಗಮನಿಸಬಹುದು. ಹೀಗೆ ಮಲಗುವ ಕಂದನಿಗೆ,ಹಠ ಮಾಡುವ ತನ್ನ ಮುದ್ದು ಮಗುವಿಗೆ,ಆಡಲು ಹೋಗಿ ಬಾರದಂತಹಾ ತನ್ನ ಮಗುವನ್ನು ಹುಡುಕುವುದಕ್ಕಾಗಿ ಪ್ರತೀ ಬಾರಿಯೂ ಆಕೆ ಹಾಡುವಂತಹ ಹಾಡುಗಳು ಬಹುಷಃ ನಾವು ಇಂದು ಜನಪದ ಸಾಹಿತ್ಯದಲ್ಲಿ ನೋಡುವಂತಾಹ ಹಾಡುಗಳೇ. ‘ಹೆತ್ತ ತಾಯಿಗೆ ಹೆಗ್ಗಣವೂ ಮುದ್ದು’ ಅನ್ನುವ ಹಾಗೆ ಮಗು ಎಷ್ಟು ಹಠ ಮಾಡಿದರೂ ತಾಯಿ ಹೇಳುತ್ತಾಳೆ. “ಅತ್ತರೆ ಅಳಲವ್ವಾ ಈ ಕಂದ ನನಗಿರಲಿ ಕೆಟ್ಟರೆ ಕೆಡಲಿ ಮನೆಗೆಲಸಕಂದನಮ್ಥ ಮಕ್ಕಳಿರಲವ್ವಾ ಮನೆತುಂಬಾ ಜನಪದ ಸೊಗಸು ನೇರ ಮತ್ತು ಸರಳ.ತನ್ನ ಮನದ ಇಂಗಿತ್ವನ್ನು ತಾಯಿಯಾದವಳು ತೋಡಿಕೊಳ್ಳುವ ಪರಿ ನಿಜಕ್ಕೂ ಅದ್ಬುತ.ಹಿಂದೆ ಮಕ್ಕಳೆಲ್ಲಾ ಚಂದಿರನನ್ನು ತಿಂಗಳು ಮಾವ ಎಂಬ ಮುದ್ದಾದ ಹೆಸರಿನಿಂದ ಕರೆಯುತ್ತಿದ್ದರು.ತಾಯಿಯಂದಿರು ತಮ್ಮ ಹಾಡುಗಳ ಮೂಲಕ ಮಕ್ಕಳಿಗೆ ಚಂದಿರನನ್ನು ತೋರಿಸಿ ಊಟಮಾಡಿಸುತ್ತಿದ್ದಾಗ ತಮ್ಮ ಹಾಡುಗಳಲ್ಲಿ ಚಂದಿರನಿಗೆ ಕೊಡುತ್ತಿದ್ದ ಹೆಸರುಗಳು ನಿಜಕ್ಕೂ ಅನುರೂಪವಾಗಿತ್ತು. ಹೀಗೆ ಲಾಲಿ ಹಾಡುಗಳು,ದೂರಿ ಪದ,ಮಕ್ಕಳನ್ನು ಸಮಾಧಾನ ಮಾಡಲು ಬಳಸುವಂತಹ ಜನಪದ ಹಾಡುಗಳಾದರೆ,ಬೀಸುಕಲ್ಲು ಹಾಡು,ನಾಟಿ ಹಾಕುವಾಗ-ಕಳೆಕೀಳುವಾಗ ಹೀಗೆ ದುಡಿಯುವ ಸಂದರ್ಭದಲ್ಲಿ ಹೆಂಗಸರು ನಾನ ಬಗೆಯ ಹಾಡುಗಳನ್ನು ಹಾಡುತ್ತಿದ್ದದ್ದನ್ನು ನಾವು ಕಂಡುಕೊಳ್ಳಬಹುದು.ಬಹುಷಃ ಆ ಜನಪದೀಯ ಪರಿಸರ ಇಂತಹ ಹಾಡುಗಳ ರಚನೆಗೆ ಪೂರಕವಾಗಿತ್ತು ಎನ್ನುವಂತಹದ್ದು ಇಲ್ಲಿ ಗಮನಿಸಬೇಕಾದಂತಹ ಅಂಶ.ದುಡಿಮೆಯ ಆಯಾಸವನ್ನು ಕಡಿಮೆ ಮಾಡುವುದಕ್ಕೋಸ್ಕರ ಇಂತಹ ಹಾಡುಗಳ ಹುಟ್ಟು ಆಯಿತು ಅನ್ನುವಂತಹದ್ದು ಸಹ ಅಷ್ಟೇ ಸತ್ಯ.ಅನೇಕ ಜನಪದ ಸಾಹಿತ್ಯಗಳಲ್ಲಿ ಸಮಾಜ ಒಪ್ಪಿಕೊಂಡಿರುವಂತಹ ಮೌಲ್ಯಗಳನ್ನೇ ನಾವು ಕಾಣಬಹುದು. ಕರ್ನಾಟಕ ವಿಸ್ತಾರವಾದ ಪ್ರದೇಶ ಹಾಗೂ ವೈವಿಧ್ಯಗಳಿಂದ ಕೂಡಿರುವಂತಹಾ ರಾಜ್ಯ.ಅರಬ್ಬೀ ಸಮುದ್ರ,ಕರಾವಳಿ ಪ್ರದೇಶಗಳು,ಮಲೆನಾಡು ಪೂರ್ವ,ಪಶ್ಚಿಮ ಘಟ್ಟಗಳ ನಡುವೆ ಜನರ ಅನುಸರಿಸುತ್ತಿರುವ ಸಂಸ್ಕೃತಿ, ಭಾಷೆ,ಆಚರಿಸುವ ಹಬ್ಬಗಳು ಬೆಳೆಯುವ ಬೆಳೆ ಕೆಲಸ ಕಾರ್ಯಗಳು,ರೀತಿ-ನೀತಿಗಳು ಎಲ್ಲವೂ ವೈವಿದ್ಯಮಯ. ತಾವು ನಂಬುವಂತಹ ದೇವರು ನಂಬಿಕೆಗಳಿರಬಹುದು.ಎಲ್ಲವನ್ನೂ ಸಹ ಹಾಡು-ಜನಪದ ಪ್ರಕಾರಗಳ ಮೂಲಕ ಪ್ರಸ್ತುತ ಪಡಿಸುವಂತಹಾ ರೀತಿ ನಿಜಕ್ಕೂ ಅದ್ಭುತ.ಎಲ್ಲೆಲ್ಲಿ ಒಳ್ಳೆಯದು ಎಂದು ತಮಗೆ ಅನಿಸುತ್ತದೋ ಅಲ್ಲೆಲ್ಲ ದೇವರನ್ನು ಕಾಣುವ ಜನಪದ ಆ ದೇವರುಗಳನ್ನು ತನಗೆ ಗೊತ್ತಿರುವ ಹಿರಿಯ ಗುಣಗಳ ಸರಮಾಲೆಯಲ್ಲಿ ಅಲಂಕರಿಸುತ್ತದೆ. ಒಂದೇ ರೀತಿಯ ಪದಗಳು ಮತ್ತು ಸಾಲುಗಳು ಬೇರೆ ಬೇರೆ ದೇವರುಗಳನ್ನು ಹೊಗಳುವ ಹಾಡುಗಳಲ್ಲಿ ಕಂಡುಬರುತ್ತದೆ.ದ್ರಾವಿಡ ಸಂಸ್ಕೃತಿಯ ಮೂಲದ ಸಂಬಂಧದಲ್ಲಿ ತಾಯಿಗೆ ಹೆಚ್ಚಿನ ಮನ್ನಣೆ ಇದ್ದುದರಿಂದ ಅದರ ಗುರುತಾಗಿ ನಮ್ಮಲ್ಲಿ ಹೆಣ್ಣು ದೇವರುಗಳೇ ಹೆಚ್ಚು.ಅವುಗಳ ಬಣ್ಣಣೆಯೂ ಕೂಡ ಬಗೆ ಬಗೆಯಾಗಿ ಕಾಣಿಸಿಕೊಂಡಿವೆ.ಜಾತ್ರೆ-ಹಬ್ಬಗಳ ಸಮಯಗಳಲ್ಲಿ ಇಂತಹ ಹಾಡುಗಳನ್ನು ಜನ ಹಾಡುತ್ತಿದ್ದರು. ಜೋಳ,ರಾಗಿ ಬೀಸುವ ಸಮಯದಲ್ಲೂ ಗರತಿಯಾದವಳು ದೇವರ ಮಹಿಮೆಯನ್ನೇ ಕಾಣುತ್ತಾಳೆ.ಕಲ್ಲವ್ವ ತಾಯಿಯಾಗಿ ಬೀಸು ಕಲ್ಲನ್ನು ಕಂಡವರು ನಮ್ಮ ಹಿರಿ ತಲೆಮಾರಿನವರು.ಅದರ ಜತೆಗೆ ತಾನು ಇಟ್ಟುಕೊಂಡಿರುವ ಸಂಬಂಧವನ್ನು ಕುರಿತು ಆಕೆಯೂ ಹಾಡಿರುವುದನ್ನು ನಾವು ಕಾಣಬಹುದು. ರಾಗಿಯೂ ಮುಗಿದಾವೂ,ರಾಜಾಣ ಮುಗಿದಾವೂ ನಾನ್ಹಿಡಿದ ಕೆಲಸ ವದಗ್ಯಾವು ರಾಗೀಕಲ್ಲೆ ನಾತೂಗಿ ಬಿಡುತೀನಿ ಬಲದೋಳಾ... ಬಹುಷಃ ಈಗ ಇಂತಹಾ ಜನಪದ ಸಂಭ್ರಮ,ಜನಪದ ಜಾತ್ರೆ,ಯುವಜನಮೇಳಗಳ ಮೂಲಕ ನಮಗೆ ಹತ್ತಿರವಾಗುವಂತಹ ಬೀಸುಕಲ್ಲು ಹಾಡು,ಜನಪದಗೀತೆ,ಸೋಬಾನೆ ಪದ,ಗೀಗೀಪದ ಇವೆಲ್ಲವೂ ಒಂದೊಂದು ರೀತಿಯಲ್ಲಿ ದೇವರ ಬಗ್ಗೆ ಒಳಗೊಂಡಿದ್ದರೆ,ಇನ್ನು ಕೆಲವು ಗೀಗೀಪದ,ಲಾವಣಿಗಳಲ್ಲಿ ಸಾಮಾಜಿಕ ಸಮಸ್ಯೆಗಳನ್ನು ಪ್ರತಿಬಿಂಬಿಸುವಂತಹ ಸಾಲುಗಳನ್ನು ನಾವು ಗಮನಿಸಬಹುದು. ಹಿಂದೆ ಸೋಬಾನೆ ಪದಗಳು ಮದುವೆಯ ಸಂದರ್ಭದಲ್ಲಿ ಸರ್ವೇ ಸಾಮಾನ್ಯವಾಗಿದ್ದವು.ಮದುವೆಯ ಪ್ರತೀ ಸನ್ನಿವೇಶಗಳಲ್ಲೂ ಒಂದೊಂದು ಹಾಡುಗಳು ಇರುತ್ತಿದ್ದವು.ಈಗೀಗ ರಿಸೆಪ್ಷನ್ ಗಲ ಹೆಸರಿನಲ್ಲಿ ಆಗುವಂತಹ ಮದುವೆಗಳು ಬಹುಷಃ ಜನಪದೀಯರು ನೋಡಿರುವ ಸೋಬಾನೆ ಪದಗಳಿಗೆ ಕೊನೆಹಾಡಿವೆ. ಬೀಸುವ ಕಲ್ಲು,ಒನಕೆಗಳನ್ನಂತೂ ಯಾವ ಮನೆಗಳಲ್ಲೂ ನಾವು ಕಾಣಲಾರೆವು.ಜೋಳ,ರಾಗಿ ಬೆಳೆಗಳಾಗಲಿ ಅಥವಾ ಭತ್ತವನ್ನಾಗಲಿ ನಾವು ಈಗ ಬೆಳೆಯದಿರುವುದೇ ಅದಕ್ಕೆ ಮುಖ್ಯ ಕಾರಣ. ಮಹಿಳೆಯರು ಇಂದು ಉದ್ಯೋಗವನ್ನರಸಿಕೊಂಡು ಮನೆಯಿಂದ ಹೊರಗಿರುವುದು, ಜನರು ಪಟ್ಟಣಗಳನ್ನು ಆಶ್ರಯಿಸಿದ್ದು,ವಾಣಿಜ್ಯ ಬೆಳೆಗಳಿಗೆ ರೈತ ಮಾರುಹೋಗಿದ್ದು ಇವೆಲ್ಲವು ನಮ್ಮ ಜನಪದೀಯ ಪರಿಸರವನ್ನು ಎಷ್ಟರಮಟ್ಟಿಗೆ ಬದಲಾಯಿಸಿದೆ ಎನ್ನುವಂತಹದ್ದು ನಾವು ಕಾಣಬಹುದು. ಗರತಿಯಾದವಳ ಚಟುವಟಿಕೆಗಳೆಲ್ಲವೂ ಬದಲಾದ್ದರಿಂದ ಬಹುಷಃ ಅಮ್ಮ ಹಿರಿಯಜ್ಜಿಯರು ಹುಟ್ಟುಹಾಕಿದ ಜನಪದ ಸಂಸ್ಕೃತಿ, ಕೆಲೆಗಳ ಬೆಳವಣಿಗೆಯೂ ಆಗುತ್ತಿಲ್ಲ.ಹೊಸ ಹುಟ್ಟಂತೂ ಇಲ್ಲವೇ ಇಲ್ಲ. ಪ್ರಸ್ತುತ ದಿನಗಳಲ್ಲಿ ಜನಪದ ಸಾಹಿತ್ಯ,ಸಾಂಸ್ಕೃತಿಕ ಚಟುವಟಿಕೆಗಳನ್ನು ಇಷ್ಟಪಟ್ಟರೂ ಸಹ ಒಂದು ರೀತಿಯಲ್ಲ್ಲಿ ಅದು ಕಾಂಕ್ರೀಟ್ ಮನೆಗೆ ವರ್ಣ ಕುಟೀರ ಎಂದು ಹೆಸರಿಟ್ಟ ಹಾಗೆ.ನಮಗೆ ಹೆಸರಿಗೆ ಎಲ್ಲವೂ ಬೇಕು.ಅದರ ಸಾಹಿತ್ಯ-ಸಂಸ್ಕೃತಿಗಳ ಕಲ್ಪನೆ ಜನರಿಗೆ ಇಲ್ಲದಿರುವುದು ಬಹಳ ಖೇದಕರ ಸಂಗತಿ. ಹೆಣ್ಣುಮಕ್ಕಳ ಗಂಡಮನೆಗೆ ಹೊರಟು ನಿಂತಾಗ ಇರಬಹುದು.ತನಗೊಂದು ಮಗುವಾದಾಗ ಇರಬಹುದು ಅಥವಾ ಮಕ್ಕಳು ದೊಡ್ಡವರಾಗಿ ತಮಗೇನಾದರೂ ಕಷ್ಟವಾದಾಗಲೋ, ತಮ್ಮ ಮನೆಗೆ ಬಂದ ಸೊಸೆ ಕಾದಾಟವಾಡಿ ತಮ್ಮನ್ನು ಹೊರಹಾಕಿದಾಗಿನ ಸಂದರ್ಭಗಳಲ್ಲಿ ಹುಟ್ಟಿಕೊಂಡಂತಹ ಅನೇಕ ಹಾಡುಗಳನ್ನು ಜನಪದಗೀತೆಗಳ ರೂಪದಲ್ಲಿ ನಾವು ಈಗ ಇಂತಹ ಕಾರ್ಯ್ರಮಗಳಲ್ಲಿ ಮಾತ್ರ ಕೇಳುವಂತಾಗಿದೆ. ಹೀಗೆ ಹೊಲಗದ್ದೆಗಳಲ್ಲೋ ಮನೆಯ ಚಾವಣಿಯಲ್ಲೋಮಗುವಿನ ತೊಟ್ಟಿಲ ಬಳಿಯಲ್ಲೋ ಹುಟ್ಟಿಕೊಡಂತಹಾ ಜನಪದಗೀತೆ, ಜನಪದ ನೃತ್ಯ, ನಮ್ಮ ಹಿರಿಯರ ಆಚರಣೆ,ಪದ್ದತಿಗಳು ಇಂದು ಮಾಯವಾಗುತ್ತಿದೆಯೋ? ಆನ್ನುವ ಒಂದು ಪ್ರಶ್ನೆ ನಮ್ಮೆಲ್ಲರ ಎದುರಿದೆ.ಮಾಯವಾಗಿದೆ.ಮಾಯವಾಗಿದೆ ಎಂದು ಖಡಾಖಂಡಿತವಾಗಿ ನಾವು ಹೇಳುವಂತಿಲ್ಲ.ಎಲ್ಲೋ ಅಲ್ಲಲ್ಲಿ ಗಾಳಿ ತೂರಿ ಸೇರಿಕೊಂಡಿದೆ ಅನ್ನುವುದಂತೂ ಸತ್ಯ. ಆಗಿನ ಕಾಲದಲ್ಲಿ ಅಂತಹ ಪರಿಸರವಿತ್ತು.ಗಂಡಸಿನ ಒಡೆತನದಲ್ಲೊಂದು ಡೊಡ್ಡ ಕುಟುಂಬ.ಆತನ ವ್ಯವಸ್ಥೆಯೊಳಗೆ ತಮ್ಮ ಸಂತೋಷ ಹುಡುಕುತ್ತಿದ್ದ ಗರತಿಯರು.ಮನಸ್ಸು ಬಿಚ್ಚಿ ಏನನ್ನೂ ಸ್ವತಂತ್ರವಾಗಿ ಹೇಳಿಕೊಳ್ಳಲಾಗದ ಸಂದರ್ಭಗಳು, ಬಂದ ಸೊಸೆಯಿಂದ ಗಂಡುಮಗುವಾಗದೇ ಇದ್ದಾಗ ಆಕೆ ಅನುಭವಿಸುವ ಕಷ್ಟಗಳು,ಶ್ರಮಪಟ್ಟು ಕೆಲಸ ಮಾಡಬೇಕಾದ ಸಂದರ್ಭಗಳು ಹಳ್ಳಿಯ ಹೆಂಗಸರೆಲ್ಲಾ ಗದ್ದೆಯಲ್ಲಿ ಒಟ್ಟಾಗಿ ಬೆಳೆ ಕೀಳುವಂತಹ, ಬೀಜ ಬಿತ್ತುವಂತಹ ವ್ಯವಸ್ಥೆಗಳು,ಬಂದ ಬೆಳೆಯ ಮುಂದೆ ತಮ್ಮ ಸಂತೋಷವನ್ನು ಪ್ರಸ್ತುತ ಪಡಿಸುವ ಸಮಯಗಳು ಇವೆಲ್ಲವೂ ಒಂದು ಜನಪದ ಪರಿಸರವನ್ನು ನಮ್ಮ ಪೂರ್ವಜರಿಗೆ ಒದಗಿಸಿಕೊಟ್ಟಿತ್ತು.ಈ ಎಲ್ಲಾ ಸಂದರ್ಭಗಳಲ್ಲಿ ಹುಟ್ಟಿಕೊಂಡತಹಾ ಗೀತೆ,ಪದ್ಯಗಳು,ನೃತ್ಯಗಳು ಆಚರಣೆ ಪದ್ದತಿಗಳನ್ನೇ ನಾವಿಂದು ಜನಪದಗೀತೆ,ಜನಪದ ನೃತ್ಯ, ಒಟ್ಟಾಗಿ ಜನಪದ ಕಲೆಗಳೆಂದು ಕರೆಯುತ್ತಿದ್ದೇವೆ. ಪೂರ್ವಜರ ಅನುಭವಗಳೇ ಜನಪದ ಕಲೆಯ ಹುಟ್ಟಿಗೆ ಕಾರಣ.ಇಂದಿನ ಜನರಿಗೆ ಅಂತಹಾ ಅನುಭವಗಳಿಲ್ಲ.ಅದಕ್ಕಿಂತ ಮಿಗಿಲಾಗಿ ಅಂತಹಾ ಒಂದು ಪರಿಸರವಿಲ್ಲದಿರುವುದು ಇಂದಿನ ಜನಪದ ಕಲೆಗಳ ಅವಗಣನೆಗೆ ಕಾರಣ ಎಂದರೆ ತಪ್ಪಿಲ್ಲ.ಅದು ವಾಸ್ತವ ಸತ್ಯ.ಮಹಿಳೆಯರನ್ನೇ ಗಣನೆಗೆ ತೆಗೆದುಕೊಂಡು ಜನಪದ ಸಾಹಿತ್ಯ ಕಲೆಗಳ ಬಗ್ಗೆ ಹೇಳಲು ಕಾರಣ, ಹೆಣ್ಣುಮಕ್ಕಳು ಮತ್ತು ಜನಪದ ಸಂಸ್ಕೃತಿ-ಕಲೆಗಳಿಗೊಂದು ಅವೈನಾಭಾವ ಸಂಭಂದವಿದೆ.ನೀವು ಗಮನಿಸಬಹುದು ಅತೀ ಹೆಚ್ಚುಜನ ಜನಪದ ನೃತ್ಯ,ಗೀತೆಗಳೆಲ್ಲವೂ ಹೆಣ್ಣಿನ ಸುತ್ತಲಿನ ಪರಿಸ್ಥಿತಿ ಹಾಗೂ ಆಕೆಯ ಬಗ್ಗೆಯೇ ಇರುವಂತಹವುಗಳಿಗೆ ಮತ್ತು ಆಕೆಗೇ ಸಂಬಂದಪಟ್ಟಿರುತ್ತದೆ. ಈಗಿನ ಮಹಿಳೆಯರು ತಾವು ಗಂಡ-ಹೆಂಡತಿ ಮಾತ್ರ ಮನೆಯಲ್ಲಿರಬೇಕೆಂದು ಬಯಸುವವರು.ದೀಪಾವಳಿಗೋ,ಇನ್ನ್ಯಾವುದೋ ಹಬ್ಬಕ್ಕೆ ತನ್ನ ತವರು ಮನೆಯಿಂದ ಸೀರೆಗೋಸ್ಕರ ಅಥವಾ ತವರು ಮನೆಯಿಂದ ಅಣ್ಣ ಬರಲಿ ಎಂದು ನಿರೀಕ್ಷಿಸುವುದು ಕಡಿಮೆಯಾಗಿಬಿಟ್ಟಿದೆ.ತನ್ನ ಕಛೇರಿ ಕೆಲಸದ ನಡುವೆ ಸಿಗುವ ಒಂದು ದಿನದ ರಜೆಯನ್ನು ಹಾಯಾಗಿ ಕಳೆಯಬೇಕೆಂದು ಆಕೆ ಬಯಸುತ್ತಾಳೇ.ಈಗೀಗ ಕುಟುಂಬ ಜೀವನದಲ್ಲಂತೂ ಗಂಡಸಿನ ದಬ್ಬಾಳಿಕೆ ಆದದ್ದನ್ನು ನಾವು ಗಮನಿಸಬಹುದು.ಮಾಯವಾಗುತ್ತಿರುವ ಜಾತಿ ಪದ್ದತಿ ಒಂದು ಒಳ್ಳೆಯ ಬೆಳವಣಿಗೆ ಎನ್ನಬಹುದು.ಹೀಗೆ ಎಲ್ಲ ವ್ಯವಸ್ಥೆಗಳನ್ನು ನಾವು ಬದಲಾಯಿಸಿಕೊಂಡಿರುವುದರಿಂದ,ಜನಪದೀಯ ಪರಿಸರದಿಂದ ದೂರ ಸರಿದ ಕಾರಣದಿಂದ ಜನಪದ ಕಲೆ-ಸಂಸ್ಕೃತಿ ಸಾಹಿತ್ಯ ನಮ್ಮಿಂದ ದೂರವಾಗುತ್ತಿದೆ.ಆದರೆ ಅದು ಖಂಡಿತ ಇನ್ನೂ ಮಾಯವಾಗಿ ಹೋಗಿಲ್ಲ ಎಂದೇ ಹೇಳಬಹುದು!