Saturday, April 4, 2009

ಬೇಡವೆಂದರೂ ಕಾಡುವ ನೆನಪು


ಕಾಲ, ಸಮಯಗಳೆಂಬುದು ನಮ್ಮ ಊಹೆ, ಕಲ್ಪನೆ, ನಿರೀಕ್ಷೆಗಳಿಗೆ ಮೀರಿದ್ದು ಎನ್ನುವ ಸತ್ಯ ಇತ್ತೀಚೆಗೆ ಯಾಕೋ ಬಹಳವಾಗಿ ಕಾಡುತ್ತಿದೆ. ಆ ಸತ್ಯವನ್ನು ಒಪ್ಪಿಕೊಳ್ಳಲೂ ಮನಸ್ಸು ಹಿಂಜರಿಯುತ್ತಿದೆ. ಕಳೆದು ಹೋದ ಸಮಯಗಳು ಮತ್ತೆ ಸಿಗುವಂತಾದರೆ!! ಕಾಲ ಹರಿವ ನೀರಿನಂತಿರದೆ ಬೇಕಾದಾಗ ಪಡೆಯುವ ಟ್ಯಾಪಿನ ನೀರಿನಂತಿದ್ದಿದ್ದರೆ...ಇರಬೇಕಿತ್ತೇನೋ ಅನ್ನುವ ಅನುಭೂತಿಯ ಜೊತೆಗೆ ಅದರ ಅಪಾಯಗಳ ಪರಿಮಿತಿ ಹೆಚ್ಚು ಅನ್ನುವ ಇನ್ನೊಂದು ಸತ್ಯ ನಮಗೆ ಗೋಚರಿಸಿ ಬಿಡುತ್ತದೆ.
ಇತ್ತೀಚೆಗೆ ಪರೀಕ್ಷಾ ಕೊಠಡಿಯ ಮೇಲ್ವಿಚಾರಕಿಯಾಗಿ ಹಾಲಿನಲ್ಲಿ ಸುತ್ತಾಡುತ್ತಿದ್ದಾಗ ನಾನು ಪರೀಕ್ಷೆ ಬರೆಯುತ್ತಿದ್ದುದು, ಆ ದಿನಗಳ ತಯಾರಿ, ಭಯ, ಪೇಜು ತುಂಬಿಸುವ ಅವಸರ, ಎಲ್ಲರಿಗಿಂತ ಹೆಚ್ಚು ಅಡಿಶನಲ್ ಶೀಟ್ ತೆಗೆದುಕೊಳ್ಳಬೇಕೆಂಬ ಮುಗ್ಧ ಸ್ಪರ್ಧೆ...ಹೀಗೆ ನೆನಪುಗಳ ಸುರುಳಿ ಬಿಚ್ಚುತ್ತಾ ಹೋದಾಗ ನಾನು ಮತ್ತೆ ಆ ಬಾಲ್ಯ, ಹೈಸ್ಕೂಲು, ಕಾಲೇಜು ಜೀವನಕ್ಕೆ ತೆರಳಬೇಕೆನ್ನಿಸಿತ್ತು. ಅಸಾಧ್ಯದ ಸಾಧ್ಯತೆಗಳೇ ಹೆಚ್ಚಿರುವ ಹುಚ್ಚು ಕಲ್ಪನೆ ಎಂದೆನ್ನಿಸಿ ಒಂದು ಕ್ಷಣ ಯೋಚನೆಗಳಿಗೆ ಬ್ರೇಕ್ ಹಾಕಿದರೂ ಮತ್ತೆ ಮತ್ತೆ ಅದೇ ನೆನಪುಗಳು ಆಪ್ತವಾಗುತ್ತವೆ.
ಅಮ್ಮ ಅಪ್ಪನಿಂದ ದೂರ ಇದ್ದು ಶಾಲೆಗೆ ಹೋಗುತ್ತಿದ್ದ ನಮ್ಮಂತವರ ಬಾಲ್ಯದ ದಿನಗಳು ಇನ್ನೂ ಬೇರೆ. ಬೇರೆ ಮಕ್ಕಳ ಅಮ್ಮಂದಿರು ಶಾಲೆಗೆ ಬುತ್ತಿ ಹಿಡಿದುಕೊಂಡು ಬಂದು ಅವರ ಮಕ್ಕಳಿಗೆ ತಿನ್ನಿಸುತ್ತಿದ್ದಾಗಲಂತೂ ಒಂಟಿತನದ ನೋವು ಬಹಳ ಕಾಡುತ್ತಿತ್ತು. ಆದರೆ ನಮ್ಮ ಮೇಲೆ ಟೀಚರ್ಳಿಗೆ ಇದ್ದ ವಿಶೇಷ ಕಾಳಜಿಗಳು ಎಲ್ಲ ನೋವುಗಳನ್ನು ಮೀರಿದ ಖುಷಿ ಕೊಡುತ್ತಿತ್ತು. ಯಾರಾದರೂ ಬೀಳಿಸಿದರೆ ಅವರ ಮೇಲೆ ಮುನಿಸಿಕೊಂಡು ಟೀಚರ್ ಬಳಿ ದೂರು ಹೇಳುತ್ತಿದ್ದ, ಬಟ್ಟೆಯಲ್ಲಿ ಕೊಳೆಯಾದರೆ ಮನೆಯಲ್ಲಿ ಬೈಗುಳ ಸಿಗುತ್ತದೆ ಎಂಬ ಭಯಕ್ಕೆ ಶಾಲೆಯಲ್ಲಿ ಬಟ್ಟೆ ತೊಳೆದುಕೊಂಡು ಹೋಗುತ್ತಿದ್ದ, ಕಡಿಮೆ ಅಂಕ ತೆಗೆದು ಯಾರಿಗೂ ಹೆಚ್ಚು ಅಂಕ ಸಿಕ್ಕಿಲ್ಲ ಎಂದು ನಮ್ಮನ್ನು ನಾವು ಸಮಥಿಸಿಕೊಳ್ಳುತ್ತಿದ್ದ, ಅಮ್ಮ ನೋಡಲು ಬಂದಾಗಲೆಲ್ಲ ಕೊಡುತ್ತಿದ್ದ 2 ರೂಪಾಯಿಯನ್ನು ನೂರರ ನೋಟಿನಂತೆ ಜೋಪಾನವಾಗಿಟ್ಟು ಅಮ್ಮ ಇನ್ನೊಮ್ಮೆ ಬರುವಾಗ ಕೊಡುವ ಎರಡು ರೂಪಾಯಿ ಸಿಕ್ಕಿದ ಮೇಲೆ 8 ದಿನ ಭರ್ಜರಿ ಐಸ್ಕ್ಯಾಂಡಿ ತಿನ್ನುತ್ತಿದ್ದ ಆ ದಿನಗಳು ಮತ್ತೆ ಬರಬೇಕೆಂದು ಯಾರು ತಾನೇ ಬಯಸುದಿಲ್ಲ.
ಅದೆಲ್ಲಕ್ಕಿಂತ ಹೆಚ್ಚಾಗಿ ನಮ್ಮೊಂದಿಗಿದ್ದ ಮುಗ್ಧತೆ, ಭಯ, ಅಂಜಿಕೆ ಈಗಿನ ಮಕ್ಕಳಲ್ಲಿ ಸಿಗುವುದು ತೀರಾ ವಿರಳ. ಸ್ಟ್ರಿಕ್ಟಾಗಿದ್ದ ದೊಡ್ಡಪ್ಪ ಮನೆಗೆ ಬಂದಾಗ ಟಿ.ವಿ ಎದುರುಗಡೆ ಕೂತಿದ್ದವರು ದಡಬಡ ಓಡಿ ಮೂಲೆಸೇರಿ ಅದೆಷ್ಟೋ ಹೊತ್ತಿನಿಂದ ಓದುತ್ತಿದ್ದೆವು ಅನ್ನುವಂತೆ ಪುಸ್ತಕ ಹಿಡಿದು ಕೊಡುತ್ತಿದ್ದ ಫೋಸು, ಮಂಗಳವಾರ ಪಿಕ್ಚರ್ ಬರುತ್ತದೆ ಎನ್ನುವ ಕಾರಣಕ್ಕೆ 8.30 ಗಂಟೆ ತನಕ ಟಿ.ವಿ.ಹಾಕದೆ, ಸಮಯ ಇನ್ನೇನು ಹತ್ತಿರ ಬಂತು ಅನ್ನುವಷ್ಟರಲ್ಲಿ ಇಲ್ಲದ ಪಾಠದ ಡೌಟ್ ಗಳನ್ನು ಕೇಳಿ ಅಲ್ಲೇ ಪಿಕ್ಚರ್ ನೋಡ್ಬೇಕಾ? ಒಳ್ಳೆ ಪಿಕ್ಚರ್ ಅಂತೆ ಎಂದು ಮುನ್ನುಡಿ ಹಾಕುತ್ತಿದ್ದಾಗ ಅವರ ಮಕ್ಕಳೆಲ್ಲಾ ರೂಮಿನ ಬಾಗಿಲ ಸಂದಿನಲ್ಲಿ ಉತ್ತರಕ್ಕೋಸ್ಕರ ನಿರೀಕ್ಷಿಸುತ್ತಿದ್ದ ದೃಶ್ಯಗಳೆಲ್ಲಾ ಫಿಲ್ಮ್ ರೀಲಿನಂತೆ ಸುತ್ತುತ್ತದೆ.
ಶಾಲಾ ದಿನಗಳಲ್ಲಿ ಮಾಡುತ್ತಿದ್ದ ಡ್ಯಾನ್ಸ್, ಹಾಡುತ್ತಿದ್ದ ಹಾಡು, ಹೇಳುತ್ತಿದ್ದ ಭಾಷಣ...ಹೀಗೆ ಆಸಕ್ತಿ ಇಲ್ಲದ ವಿಷಯಗಳೇ ಇರಲಿಲ್ಲ. ಆಗ ಅತೀ ಚಿಕ್ಕ ಸ್ಪರ್ಧಿಯಾಗಿ(ವಯಸ್ಸಿನಲ್ಲೂ, ದೇಹದಲ್ಲೂ) ವೇದಿಕೆ ಹತ್ತಿದಾಗ ಬಂದಿದ್ದ ಅತಿಥಿಗಳು ಹತ್ತಿರ ಕರೆದು ಬೆನ್ನು ತಟ್ಟಿ ಕೊಟ್ಟ ಚಾಕಲೇಟುಗಳೇ ಇವತ್ತಿಗೂ ಇರುವ ಆತ್ಮವಿಶ್ವಾಸಕ್ಕೆ ಕಾರಣ ಆಯಿತು ಎಂದರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಕಾಲೇಜಿನಲ್ಲೂ, ಸಾಂಸ್ಕೃತಿಕ ಚಟುವಟಿಕೆಗಳೇ ಹೆಚ್ಚಾಗಿದ್ದದ್ದರಿಂದ ಪರೀಕ್ಷೆಯ ಸಮಯ ಬಂದಾಗ ಹಾಸ್ಟೆಲ್ ನಲ್ಲಿ ಬೆಳಗಿನವರೆಗೂ ಕೂತು ಪರೀಕ್ಷೆ ಬರೆದು ಬರುತ್ತಿದ್ದ ನೆನೆಪುಗಳು ಈಗ ಒಂದು ತೆರನಾದ ಖುಷಿ ಕೊಡುತ್ತಿದೆ ಜೊತೆಗೆ ನನ್ನ ಬಗ್ಗೆ ನನಗೇ ಸಣ್ಣದಾದ ಅಭಿಮಾನ ಬಂದುಬಿಡುತ್ತದೆ.
ದ್ವೇಷ, ಅಸೂಯೆ ಗೊತ್ತಿರದ ನಮ್ಮನ್ನೂ, ಜಾತಿ, ರಾಜಕೀಯ, ಗುಂಪುಗಾರಿಕೆಗಳ ಜೊತೆ ಬದುಕುವ ಈಗಿನ ವಿದ್ಯಾರ್ಥಿಗಳನ್ನೂ...ಸುಂದರ ಕಲ್ಪನೆಗಳು, ಮುಗ್ಧತನಗಳೊಂದಿಗೆ ಆಟವಾಡುತ್ತಾ, ಅಜ್ಜಿ ಕಥೆ ಕೇಳುತ್ತಾ ಬೆಳೆದ ನಮ್ಮ ಬಾಲ್ಯವನ್ನೂ...ರಿಯಾಲಿಟಿ ಶೋಗಳ ನಡುವೆ ಬಾಲ್ಯದ ಸೂಕ್ಷ್ಮ ಅನುಭವ, ಅನುಭಾವಗಳನ್ನು ಕಳೆದು ಕೊಳ್ಳುತ್ತಿರುವ ಈಗಿನ ಮಕ್ಕಳನ್ನೂ ನೊಡಿದರೆ ಅವರ ಬಗ್ಗೆ ಮರುಕವೆನ್ನಿಸುತ್ತದೆ. ಅವರ ಸ್ಪರ್ಧೆ ಮನೋಭಾವ, ಸಮಾಜವನ್ನು ಅದೇ ಧೈರ್ಯ, ಆತ್ಮವಿಶ್ವಾಸದಿಂದ ಎದುರಿಸಬೇಕಾದ ಎಲ್ಲಾ ಅನಿವಾರ್ಯತೆಗಳಿದ್ದರೂ ಬಾಲ್ಯ ಅದರಂತೆಯೇ ಇದ್ದರೆ ಚೆನ್ನ ಮತ್ತು ಆ ಬಾಲ್ಯದ ನೆನಪುಗಳು ಇನ್ನೂ ಚೆಂದ.

8 comments:

ಇಂಚರ said...

ನಿಮ್ಮ ಲೇಖನ ಚೆನ್ನಾಗಿದೆ. ಓದುತ್ತ ನನ್ನ ಬಾಲ್ಯ ನೆನಪಾಯುತು. ನನ್ನನ್ನೇ ನಾನು ಕಳಕೊಂಡುಬಿಟ್ಟೆ.

Anonymous said...

ನಾವು ಎಸ್.ಡಿ.ಎಂ ನಲ್ಲಿ ಓದುತ್ತಿದ್ದಾಗ ನನ್ನ ಜೂನಿಯರ್ ಆಗಿದ್ದ ಮೌಲ್ಯ ನೀನೆ ಅಲ್ವಾ ? ಚೆಂದಗಿದೆ ಬರಹ ... ಹೀಗೆ ಮುಂದುವರಿಯಲಿ ಅಕ್ಷರ ಯಾತ್ರೆ ..
ಶುಭವಾಗಲಿ,
ಶಮ, ನಂದಿಬೆಟ್ಟ

hEmAsHrEe said...

chennaagide baraha. bareyuttaa iri, heege !

ಜಿ.ಎಸ್.ಬಿ. ಅಗ್ನಿಹೋತ್ರಿ said...
This comment has been removed by the author.
ಜಿ.ಎಸ್.ಬಿ. ಅಗ್ನಿಹೋತ್ರಿ said...

ಬ್ಲಾಗ್ ಲೋಕಕ್ಕೆ ಸ್ವಾಗತ....ಜತೆಗೆ ನಮಸ್ಕಾರ...
ತಾವು ಈ ದಿನದಲ್ಲೂ ಜಾನಪದದ ಬಗ್ಗೆ ಆಸಕ್ತಿ ಉಳಿಸಿಕೊಂಡಿದ್ದು ಖುಷಿಯಾಯಿತು. ಬರಹ ಕೂಡ...

namana bajagoli said...

ಚೆನ್ನಾಗಿದೆ,ಮೈ ಆಟೋಗ್ರಾಫ್ ಚಿತ್ರದ "ಸವಿ ಸವಿ ನೆನೆನಪು"ಹಾಡು ನೆನಪಿಗೆ ಬಂತು..........ನಮನ ಬಜಗೋಳಿ

ಮನಸು said...

ಮೌಲ್ಯ ನೀವು ನಮ್ಮ ಜೀವನದ ಅತಿ ಮೌಲ್ಯದ ದಿನಗಳನ್ನ ನೆನಪು ಮಾಡಿಸಿಬಿಟ್ಟಿರಿ... ಬರಹದ ಶೈಲಿ ಕೂಡ ಚೆನ್ನಾಗಿದೆ.. ಸಾಗಲಿ ನಿಮ್ಮ ಪಯಣ ನಮ್ಮೊಂದಿಗೆ..
ವಂದನೆಗಳು..
ಮನಸು..

nsp said...

ಆ ಚಂದದ ಶಾಲಾ ದಿನಗಳನ್ನ ಮತ್ತೆ ನೆನಪು ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್...
ಪ್ರಸನ್ನ ಆಡುವಳ್ಳಿ, ಬಾಳೆಹೊನ್ನೂರು