Wednesday, July 1, 2009

ನನ್ನಮ್ಮ ಗ್ರೇಟ್...


ಅಮ್ಮನ ಬಗ್ಗೆ ಯೋಚಿಸುವಾಗಲೆಲ್ಲಾ ಅವ್ಳು ಬೇರೆಯವರಿಗಿಂತ ಇನ್ನೂ ಡಿಫರೆಂಟ್ ಅಂತ ಯಾವಾಗ್ಲೂ ಅನ್ನಿಸ್ತಿತ್ತು. ಎಲ್ರಿಗೂ ಹೀಗೇ ಅನ್ನಿಸ್ತದೋ ಏನೋ ಗೊತ್ತಿಲ್ಲ. ನನ್ನ ಜೀವನದಲ್ಲಿ ಆಕೆ ಮಾಡಿದ ಎಲ್ಲವೂ ತುಂಬಾ ವಿಶೇಷವಾಗಿ ಕಾಣ್ತಾ ಇದೆ. ಅದೇ ತರಹದ ಅಮ್ಮನಾಗಿ ನಾನು ಇರಬಲ್ಲೆನೇ ಅನ್ನುವ ಪ್ರಶ್ನೆ ನನ್ನನ್ನು ಯಾವಾಗ್ಲೂ ಕಾಡ್ತಾನೇ ಇರುತ್ತದೆ. ನಾನೂ ನನ್ನ ಅಮ್ಮನ ತರಹ ತ್ಯಾಗಿ, ಸಹನಶೀಲೆ, ತಾಳ್ಮೆಯ ಪ್ರತಿರೂಪ ಆಗ್ಬೇಕು ಅಂತ ಮಾಡಿದ ಪ್ರಯತ್ನಗಳೆಲ್ಲ ವ್ಯರ್ಥ ಆದಾಗ ನಾನು ಯೋಚಿಸಿದ್ದಿದೆ ನನ್ನ ಅಮ್ಮ ತುಂಬಾ ಗ್ರೇಟ್ ಅಂತ.ಅಪ್ಪ ಕುಡಿತದ ಚಟಕ್ಕೆ ಬಿದ್ದು ನಮಗಿದ್ದ ಹೊಟೇಲ್ ನಲ್ಲಿ ರಾತ್ರಿ ಗೊಡವೆ ಇಲ್ಲದೆ ಬಿದ್ದಿರುತ್ತಿದ್ದಾಗ ತೋಟ, ಗುಡ್ಡ, ಕಾಡಿನ ಮಧ್ಯೆ ಇದ್ದ ಮುಳಿಹುಲ್ಲಿನ ಒಂಟಿ ಮನೆಯಲ್ಲಿ ಅಮ್ಮ 3 ತಿಂಗಳ ನನ್ನ ತಮ್ಮನ ಜೊತೆ ರಾತ್ರಿ ಕಳೆಯುತ್ತಿದ್ದದ್ದನ್ನು, ತೋಟದಲ್ಲಿ ಸದ್ದಾದಾಗ ತೊಟ್ಟಿಲ ಮಗುವನ್ನು ಎತ್ತಿಕೊಂಡು ಅಡಿಕೆ ಗೋಣಿಗಳೆಡೆಯಲ್ಲಿ ಅಡಗಿ, ಹೊತ್ತು ಕಳೆಯುತ್ತಿದ್ದ ನನ್ನಮ್ಮನ ಬಗ್ಗೆ ನೆನೆಯುವಾಗ ಯಾವಾಗ್ಲೂ ಕಣ್ಣಲ್ಲಿ ನೀರಿಣುಕುತ್ತದೆ.ಆ ವಾತಾವರಣದಲ್ಲಿ ನಾನು ಬೆಳೆಯಬಾರದು ಅಂತ ನನ್ನನ್ನು ಪೇಟೆಯಲ್ಲಿರುವ ದೊಡ್ಡಮ್ಮನ ಮನೆಯಲ್ಲಿಟ್ಟು ಓದಿಸಿ, ತಿಂಗಳಿಗೊಮ್ಮೆ ಬರುವಾಗ ತನ್ನೆಲ್ಲಾ ಕಷ್ಟಗಳನ್ನು ಮುಚ್ಚಿಟ್ಟು ನನಗೆ ಬೇಕಾದದ್ದನ್ನೆಲ್ಲಾ ತೆಗೆಸಿಕೊಟ್ಟು ಹೋಗುತ್ತಿದ್ದಳು. ಆದ್ರೂ ದೊಡ್ಡಮ್ಮನ ಜೊತೆ ಅಪ್ಪ ಕೊಡ್ತಿದ್ದ ಹಿಂಸೆಯನ್ನೆಲ್ಲಾ ಹೇಳಿಕೊಂಡು ಅವಳು ಅಳುವಾಗ ಕದ್ದು ಬಾಗಿಲ ಬಳಿ ಆಲಿಸುತ್ತಿದ್ದ ನನ್ನ ಪುಟ್ಟ ಕಂಗಳು ತುಂಬಿ ಹೋಗುತ್ತಿತ್ತು.ದೊಡ್ಡವಳಾದಂತೆ ನನಗೆ ಸ್ನೇಹಿತೆ ಅವಳೆ ಆದ್ಳು. ಒಂದು ದಿನ ಅಪ್ಪ ಎಳೆದು ಬಿಸಾಡಿದ ತುಂಡು ಬೀಡಿಯನ್ನು ಆಗ ಒಂದನೇ ಕ್ಲಾಸಿನಲ್ಲಿ ಓದುತ್ತಿದ್ದ ನನ್ನ ತಮ್ಮನಿಗೆ ಎಳೆಸಿದ್ದೆ. ಅದು ಗೊತ್ತಾಗಿ ಅಮ್ಮ ನನ್ನನ್ನು ಅಟ್ಟಿಸಿಕೊಂಡು ಬಂದು ಹೊಡೆದಿದ್ದಳು. ಅದೇ ಮೊದಲು, ಅದೇ ಕೊನೆ. ಅಮ್ಮ ನನಗೆ ಹೊಡೆದ ನೆನಪೇ ಇಲ್ಲ. ನಾನೇನೇ ತಪ್ಪು ಮಾಡಿದ್ರೂ ಅವಳ ಅಳುವೇ ಬೈಗುಳವಾಗುತ್ತಿತ್ತು. ಅದೊಂದೇ ಸಾಕಿತ್ತು ನನ್ನನ್ನು ತಿದ್ದಲು.ನಮ್ಮದು ಪ್ರೇಮ ವಿವಾಹ. ಕೆಲವು ಕಾರಣಗಳಿಗೋಸ್ಕರ ಈ ಮದುವೆಗೆ ಯಾರ ಒಪ್ಪಿಗೆಯೂ ಇರಲಿಲ್ಲ. ನನ್ನ ಮನೆಯವರಿಲ್ಲದೆ ನಾನು ಮದುವೆ ಮಾಡ್ಕೊಂಡೆ. ಆಮೇಲೆ ಕಾಡಿದ್ದೆಲ್ಲಾ ಅಮ್ಮನ ನೆನಪು ಮಾತ್ರ. ಜೊತೆಗೆ ನನಗಾಗಿ ಕುಡಿತ ಬಿಟ್ಟ ಅಪ್ಪನ ನೆನಪೂ.. ಒಂದು ವರ್ಷದ ನಂತರ ನಾನು ಅಮ್ಮನಾದಾಗ ಅನ್ನಿಸಿತು ನಮ್ಮನ್ನು ಹಡೆಯುದಕ್ಕೆ, ಸಾಕುದಕ್ಕೆ ಆಕೆ ಅದೆಷ್ಟು ಕಷ್ಟ ಪಟ್ಟಿದ್ಳು ಅಮ್ಮ. ನಮ್ಮ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾಕೆ ಆಕೆ ಮುಖ್ಯ ಅಂತ ಅನ್ನಿಸ್ಲಿಲ್ಲ. ಮನೆಯಿಂದ ಹೊರಹೋದ ಮಕ್ಕಳನ್ನು ವಾಪಸ್ ಕರೆದುಕೊಳ್ಳುವುದು ತುಂಬಾ ಅಪರೂಪ. ಆದ್ರೆ ನನ್ನಮ್ಮ ಮತ್ತೆ ನನ್ನನ್ನು ಕರೆದ್ಳು. ಮತ್ತೆ ನನ್ನನ್ನು ಪ್ರೀತಿಯಿಂದ ತಲೆ ನೇವರಿಸಿದ್ಳು. ಎಲ್ಲಾ ಮರೆತು ನೀನು ಚೆನ್ನಾಗಿದ್ರೆ ಅಷ್ಟೇ ಸಾಕು ಅಂತ ಹೇಳಿದ್ಳು. ಆ ಮಾತೊಂದೇ ಸಾಕು ನನಗೆ, ನನ್ನಮ್ಮ ಗ್ರೇಟ್ ಅಂತ ಸಾರಿ ಸಾರಿ ಹೇಳುದಕ್ಕೆ...